
ಬಡವರಿಗೆ ಮಾತ್ರ ಪಂಚ ಗ್ಯಾರಂಟಿ (Congress Guarantee) ತಲುಪುವಂತಾಗಬೇಕು ಎಂದು ಗೃಹಸಚಿವ ಡಾ. ಜಿ. ಪರಮೇಶ್ವರ್ (Dr. G. Parameshwar) ಹೇಳಿದ್ದಾರೆ. ತುಮಕೂರಿನಲ್ಲಿ (Tumkur) ನಡೆದಿದ್ದ ಕೆಡಿಪಿ ಸಭೆಯಲ್ಲಿ (KDP Meeting) ಪರಮೇಶ್ವರ್ ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ಹಲವು ಶಾಸಕರ ಅಭಿಪ್ರಾಯವನ್ನು ಸರ್ಕಾರಕ್ಕೆ ತಿಳಿಸಲಾಗುವುದು ಎಂದು ಪರಮೇಶ್ವರ್ ಹೇಳಿದ್ದಾರೆ. ಸಭೆಯಲ್ಲಿ ತುರುವೇಕೆರೆ ಶಾಸಕ ಎಂ.ಟಿ. ಕೃಷ್ಣಪ್ಪ ಮಾತನಾಡಿ, “2 ಲಕ್ಷ ಸಂಬಳ ಪಡೆಯುವವರು ಕೂಡ ಉಚಿತ ಬಸ್ ಸೇವೆಯನ್ನು ಬಳಸುತ್ತಿದ್ದಾರೆ. ಇದನ್ನು ನಿಲ್ಲಿಸಬೇಕು. ಬಡವರಿಗೆ ಮಾತ್ರ ಉಚಿತ ಸೇವೆ ಲಭ್ಯವಾಗಬೇಕು” ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಜಿ. ಪರಮೇಶ್ವರ್, “ಕೇವಲ ಉಚಿತ ಬಸ್ ಸೇವೆ ಮಾತ್ರವಲ್ಲ, ಗೃಹಲಕ್ಷ್ಮಿ (Gruha Lakshmi) ಯೋಜನೆಯೂ ಸಹ ಬಡವರಿಗೆ ಮಾತ್ರ ತಲುಪುವಂತಾಗಬೇಕು” ಎಂದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿಗೆ ಪರಮೇಶ್ವರ್ ತರಾಟೆ
ಶಾಸಕ ಕೃಷ್ಣಪ್ಪರ ಸಲಹೆಯನ್ನು ಒಳಗೊಂಡ ಪ್ರಾಸಿಡಿಂಗ್ಸ್ ಅನ್ನು ಸರ್ಕಾರಕ್ಕೆ ಕಳುಹಿಸಲಾಗುವುದು. ಬಡತನವನ್ನು ನಿರ್ಧರಿಸುವುದು ಬಿಪಿಎಲ್ ಕಾರ್ಡ್ ಆಧಾರಿತವಾಗಿರಬೇಕು ಮತ್ತು ಆ ಕಾರ್ಡ್ ಅನ್ನು ಆಧರಿಸಿ ಗ್ಯಾರಂಟಿ ಯೋಜನೆಗಳನ್ನು ಹಂಚಬೇಕು ಎಂದು ಪರಮೇಶ್ವರ್ ಹೇಳಿದ್ದಾರೆ. ಅದೇ ಸಮಯದಲ್ಲಿ, “ಜಿಎಸ್‌ಟಿ ಮತ್ತು ಆದಾಯ ತೆರಿಗೆ ಕಟ್ಟುವವರು, ಸರ್ಕಾರಿ ನೌಕರರು ಗ್ಯಾರಂಟಿ ಯೋಜನೆಗಳಿಂದ ಹೊರಗುಳಿಯುವಂತೆ ಸರ್ಕಾರವು ಸೂಚಿಸಿದೆ. ಆದರೂ ಯಾಕೆ ಇನ್ನೂ ಅನೇಕರು ಈ ಯೋಜನೆಗಳ ಫಲಾನುಭವಿಗಳಾಗಿದ್ದಾರೆ?” ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿಗೆ ಪರಮೇಶ್ವರ್ ತರಾಟೆ ತೆಗೆದುಕೊಂಡರು.
ಗ್ಯಾರಂಟಿ ಯೋಜನೆಗಳು ಬಡವರಿಗೆ ಮಾತ್ರ ತಲುಪಬೇಕು
12 ಸಾವಿರ ಬಿಪಿಎಲ್ ಕಾರ್ಡ್‌ಗಳು ರದ್ದಾಗಿದ್ದರೂ, ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಸಂಖ್ಯೆ ಹೆಚ್ಚಾಗಿರುವುದು ಏಕೆ ಎಂದು ಪರಮೇಶ್ವರ್ ಪ್ರಶ್ನಿಸಿದ್ದಾರೆ. “ಗ್ಯಾರಂಟಿ ಯೋಜನೆಗಳು ಬಡವರಿಗೆ ಮಾತ್ರ ತಲುಪಬೇಕು” ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, “ತುರುವೇಕೆರೆ ಶಾಸಕರು ನನಗೆ ಸಲಹೆ ನೀಡಿದ್ದರು. ವಿರೋಧ ಪಕ್ಷದವರು ಸಹ ಸಲಹೆ ನೀಡಬಹುದು ಎಂದಿದ್ದೆ. ನಾವು ಚರ್ಚೆ ಮಾಡಿದ ನಂತರ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು” ಎಂದರು.
ಬಿಜೆಪಿಯಿಂದ ಯೋಜನೆಗಳನ್ನು ಹತ್ತಿಕ್ಕುವ ಪ್ರಯತ್ನ
“ನಾವು ಚುನಾವಣೆ ಸಮಯದಲ್ಲಿ ಎಲ್ಲರಿಗೂ ಈ ಯೋಜನೆಗಳನ್ನು ನೀಡುವುದಾಗಿ ಭರವಸೆ ನೀಡಿದ್ದೆವು. ಈಗ ಬದಲಾವಣೆ ಮಾಡಿದರೆ ಏನಾಗುತ್ತದೆ ಎಂಬುದನ್ನು ಪರಿಗಣಿಸಬೇಕು. ಬಡವರಿಗೆ ನೀಡುವ ಈ ಯೋಜನೆಗಳಲ್ಲಿ ಯಾವುದೇ ತೊಂದರೆ ಇದ್ದರೆ, ಅದನ್ನು ಸರಿಪಡಿಸಬೇಕು” ಎಂದು ಪರಮೇಶ್ವರ್ ಹೇಳಿದ್ದಾರೆ. “ಬಿಜೆಪಿಯವರು ಈ ಯೋಜನೆಗಳು ಯಶಸ್ವಿಯಾಗಬಾರದು ಎಂದು ಯಾವುದೇ ರೀತಿಯಲ್ಲಿ ಇವುಗಳನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದ್ದಾರೆ” ಎಂದು ಪರಮೇಶ್ವರ್ ಆರೋಪಿಸಿದ್ದಾರೆ.
ಬಡವರಿಗೆ ಹಣ ನೀಡಲು ಬಿಜೆಪಿಗೆ ಇಷ್ಟವಿಲ್ಲ
“ಈ ಗ್ಯಾರಂಟಿ ಯೋಜನೆಗಳು ಬಡವರಿಗೆ ನೀಡಲ್ಪಡುತ್ತಿವೆ. ಬಡವರಿಗೆ ಹಣ ನೀಡಲು ಬಿಜೆಪಿಯವರಿಗೆ ಇಷ್ಟವಿಲ್ಲ ಎಂದರೆ, ಅವರ ಸಿದ್ಧಾಂತವೇ ಬಡವರ ಪರವಾಗಿಲ್ಲ ಎಂದು ಸ್ಪಷ್ಟವಾಗುತ್ತದೆ. ಇದನ್ನು ಅವರು ಸಾರ್ವಜನಿಕವಾಗಿ ಹೇಳಲು ಹೊರಟಿದ್ದಾರೆ. ಜನರು ಇದನ್ನು ಗಮನಿಸುತ್ತಾರೆ. ಬಡವರಿಗೆ ನೀಡುವ ಹಣಕ್ಕೂ ನೀವು ಅಡ್ಡಿ ಮಾಡುತ್ತೀರಾ ಎಂದಾದರೆ, ಬಿಜೆಪಿಯ ಬಗ್ಗೆ ಜನರು ಏನು ಯೋಚಿಸುತ್ತಾರೆ?” ಎಂದು ಪರಮೇಶ್ವರ್ ಪ್ರಶ್ನಿಸಿದ್ದಾರೆ.
ದಲಿತರಿಗೆ ಮೀಸಲಾದ ಹಣವನ್ನು ದಲಿತರಿಗೆ ನೀಡಲಾಗುವುದು
“ದಲಿತರಿಗೆ ಮೀಸಲಿಟ್ಟ ಹಣವನ್ನು ದಲಿತರಿಗೆ ನೀಡಲಾಗುವುದು. ಶಕ್ತಿ ಯೋಜನೆಯಲ್ಲಿ ದಲಿತರು ಭಾಗವಹಿಸಲು ಸಾಧ್ಯವಿಲ್ಲವೇ? ನಾನು ಇದನ್ನು ಸಮರ್ಥಿಸಲು ಹೋಗುತ್ತಿಲ್ಲ, ಆದರೆ ಸರ್ಕಾರವು ಯೋಜನೆಗಳನ್ನು ರೂಪಿಸುವಾಗ ಎಚ್ಚರಿಕೆಯಿಂದ ಯೋಚಿಸುತ್ತದೆ. ಬಡವರಿಗೆ ನೀಡುವ ಕಾರ್ಯಕ್ರಮಗಳಲ್ಲಿ ಸ್ವಲ್ಪ ಬದಲಾವಣೆಗಳು ಆಗುತ್ತವೆ. ಇದನ್ನೇ ದೊಡ್ಡ ಸಮಸ್ಯೆಯಾಗಿ ಮಾಡುತ್ತಿದ್ದಾರೆ. ನಾವು ಹಣವನ್ನು ದೋಚಿದ್ದೇವೆಯೇ?” ಎಂದು ಪರಮೇಶ್ವರ್ ಪ್ರಶ್ನಿಸಿದ್ದಾರೆ.